ಮೆಡೀರಾ - 
ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಒಂದು ದ್ವೀಪಸ್ತೋಮ. ಪೋರ್ಚುಗೀಸರ ಆಡಳಿತಕ್ಕೆ ಸೇರಿದೆ.  ಮೆಡೀರಾ ಮತ್ತು ಪೋರ್ಟೋಸ್ಯಾಂಟೊ ಜನವಸತಿಯಿರುವ ಮುಖ್ಯದ್ವೀಪಗಳು. ಜನವಸತಿಯಿಲ್ಲದ ಡೆಸೆರ್ಟಾಸ್ ಮತ್ತು ಸೆಲ್ವಿಜಿನ್ಸ್ ಎಂಬ ಎರಡು ಪುಟ್ಟ ದ್ವೀಪಗಳೂ ಈ ಸಮೂಹಕ್ಕೆ ಸೇರಿವೆ.   

	ಇವುಗಳಲ್ಲಿ ಮೆಡೀರಾ ದ್ವೀಪವೇ ಹೆಚ್ಚು ವಿಶಾಲವಾದದ್ದು.  ದ್ವೀಪಗಳ ಒಟ್ಟು ವಿಸ್ತೀರ್ಣ 794 ಚಕಿಮೀ. ಜನಸಂಖ್ಯೆ 2,52,844 (1981). ರಾಜಧಾನಿ ಫನ್‍ಸಾಲ್.  ಈ ದ್ವೀಪಸಮೂಹ  ಅಟ್ಲಾಂಟಿಕ್ ಸಾಗರದ ಪರ್ವತಶ್ರೇಣಿಗೆ ಸೇರಿದ್ದು ಸಮುದ್ರಮಟ್ಟದಿಂದ 1860 ಮೀಟರ್ ಎತ್ತರವಿದೆ. ಇಲ್ಲಿ ಆಕರ್ಷಕ ಹÀೂವಿನ ಗಿಡಗಳೂ ಮತ್ತು ವಿವಿಧ ಜಾತಿಯ ಮರಬಳ್ಳಿಗಳೂ ಇರುವುದರಿಂದ ಈ ದ್ವೀಪಸಮೂಹವನ್ನು ಅದರಲ್ಲೂ ಮೆಡೀರಾವನ್ನು ಅಟ್ಲಾಂಟಿಕ್ ಸಾಗರದ ಶಿಲಾ ಉದ್ಯಾನವೆನ್ನುತ್ತಾರೆ.    
 
	ಕಬ್ಬು ಮುಖ್ಯ ಬೆಳೆ. ವಿವಿಧ ಕಾಳುಗಳು, ತರಕಾರಿಗಳು, ಬಾಳೆ, ಕಿತ್ತಳೆ, ಮಾವು ಮತ್ತು ದ್ರಾಕ್ಷಿ ಹೆಚ್ಚು ಬೆಳೆಯುತ್ತಾರೆ.  ಈ ದ್ವೀಪ ದ್ರಾಕ್ಷಾರಸಕ್ಕೆ ಪ್ರಸಿದ್ಧ.  ಮರದ ಸಾಮಾನುಗಳನ್ನೂ ಕಸೂತಿ ಕೆಲಸವನ್ನೂ ಮಾಡುತ್ತಾರೆ.  ಇಲ್ಲಿಯ ಜನ ಮೀನು ಹಿಡಿಯುವುದರಲ್ಲಿ ನಿಸ್ಸೀಮರು.  ಮೆಡೀರಾ ದ್ವೀಪದಲ್ಲಿರುವ ಫನ್‍ಸಾಲ್ ಈ ದ್ವೀಪಸಮೂಹದ ರಾಜಧಾನಿ ಮತ್ತು ಬಂದರು ನಗರ. ಇಲ್ಲಿಂದ ಲಿಸ್ಬನ್ ಮತ್ತು ಪೋರ್ಚುಗಲ್, ಇಂಗ್ಲೆಂಡ್ ಮುಂತಾದ ದೇಶಗಳೊಡನೆ ಸಮುದ್ರ ವ್ಯಾಪಾರ ಹಾಗೂ ಉತ್ತರ ಆಫ್ರಿಕ ಮತ್ತು ಯುರೋಪ್ ದೇಶಗಳೊಡನೆ ವಾಯುಯಾನ ಸಂಪರ್ಕವಿದೆ.      

	ಗಾನ್‍ಸಾಲ್ ವೆಜ್ ಝಾರ್ಕೋ ಎಂಬ ಪೋರ್ಚುಗೀಸ್ ನಾವಿಕ 1418 ಮತ್ತು 1420ರಲ್ಲಿ ಈ ನಡುಗಡ್ಡೆಗಳನ್ನು ಕಂಡುಹಿಡಿದ. 1421ರಲ್ಲಿ ಫನ್‍ಸಾಲ್ ಪಟ್ಟಣ ಸ್ಥಾಪಸಿದ ಹಾಗೆಯೇ ಪೋರ್ಚುಗೀಸ್ ನೆಲೆಗಳು ಸ್ಥಾಪಿಸಲ್ಪಟ್ಟು ಇಲ್ಲಿಯ ವ್ಯಾಪಾರ ವೃದ್ಧಿ ಹೊಂದಿತು. ಈ ದ್ವೀಪ ಸಮೂಹ 1580ರಿಂದ 1640ರ ತನಕ ಸ್ಪಾನಿಷರ ವಶವಾಗಿತ್ತು.  1801ರಲ್ಲಿ ಮತ್ತು 1807--14ರಲ್ಲಿ ಈ ನಡುಗಡ್ಡೆಗಳು ಬ್ರಿಟಿಷರ ಅಧೀನದಲ್ಲಿದ್ದು ಈಗ ಪೋರ್ಚುಗೀಸರಿಗೆ ಸೇರಿವೆ.
                                                                         (ಕೆ.ವಿ.ಎಸ್‍ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ